ಹಾಂಕಾಂಗ್
 	ಚೀನದ ವಿಶೇಷಾಡಳಿತಕ್ಕೆ ಒಳಪಟ್ಟಿರುವ ಒಂದು ಪ್ರಾಂತ್ಯ. ಚೀನದ ಆಗ್ನೇಯದಂಚಿನಲ್ಲಿ ದಕ್ಷಿಣ ಚೀನ ಸಮುದ್ರದ ಉತ್ತರಕ್ಕಿದೆ. ಏಷ್ಯದ ಪ್ರಮುಖ ಬಂದರುಗಳಲ್ಲಿ ಬಹುಪ್ರಾಚೀನ ಮತ್ತು ಪ್ರಸಿದ್ಧ ಬಂದರಾದ ಇದು ಜೂóಜಿóಯಾಂಗ್ (ಪರ್ಲ್‍ನದಿ) ನದೀ ಮುಖಜಭೂಮಿಯಲ್ಲಿದೆ. ಚೀನದ ಮುಖ್ಯ ಭೂಭಾಗಕ್ಕೆ ಸೇರಿರುವ ಪರ್ಯಾಯ ದ್ವೀಪದ ದಕ್ಷಿಣಕ್ಕೆ ಹಾಂಕಾಂಗ್ ಮುಖ್ಯ ದ್ವೀಪವಿದೆ. ಇವುಗಳ ಜೊತೆಗೆ 235ಕ್ಕೂ ಹೆಚ್ಚಿನ ಚಿಕ್ಕಪುಟ್ಟ ದ್ವೀಪಗಳು ಈ ಪ್ರಾಂತ್ಯಕ್ಕೆ ಸೇರಿವೆ. ವಿಸ್ತೀರ್ಣ 2,916 ಚ.ಕಿಮೀ. ಜನಸಂಖ್ಯೆ 65,66,000. ವಿಕ್ಟೋರಿಯ ಈ ಪ್ರಾಂತ್ಯದ ರಾಜಧಾನಿ.

	ಹಾಂಕಾಂಗ್ ಪ್ರಾಂತ್ಯದಲ್ಲಿ ಒರಟಾದ ಏರು ತಗ್ಗುಗಳುಳ್ಳ ಪರ್ವತ ಹಾಗೂ ಬೆಟ್ಟಗುಡ್ಡಗಳಿವೆ. ಇವುಗಳಲ್ಲಿ ಕೆಲವು 900 ಮೀ ಎತ್ತರವಿದ್ದರೆ ಹಾಂಕಾಂಗ್ ದ್ವೀಪದಲ್ಲಿರುವ ತಯ್‍ಪಿಂಗ್‍ಷಾನ್ ಪರ್ವತ 554 ಮೀ ಎತ್ತರವಿದೆ. ಹಾಂಕಾಂಗ್ ಪ್ರಾಂತ್ಯದ ಉತ್ತರದಲ್ಲಿ ಹರಿಯುವ ಸೆನ್‍ಜೆóನ್ (ಶಾಮ್‍ಚುóನ್) ನದಿ ಗಡಿಯ ಎಲ್ಲೆಯಾಗಿ ಮೇಲಿನ ಗೌನ್‍ಡಾಂಗ್ ಪ್ರಾಂತ್ಯವನ್ನು ವಿಂಗಡಿಸುತ್ತದೆ. ಹಾಂಕಾಂಗ್ ಪ್ರಾಂತ್ಯದಲ್ಲಿ ಒಟ್ಟು ಭೂಪ್ರದೇಶದಲ್ಲಿ ಸೇ.8 ಮಾತ್ರ ಬೆಳೆ ಬೆಳೆಯಲು ಸಿಗುವ ಪ್ರದೇಶವಾಗಿದೆ. ಕೋಳಿಫಾರಮ್‍ಗಳು, ಹೂವು ಮತ್ತು ತರಕಾರಿ ತೋಟಗಳು ಹೆಚ್ಚಿವೆ. ಹಾಂಕಾಂಗ್‍ನ ಕೌಲೂನ್‍ಕೊಲ್ಲಿಯ ಅನೇಕ ಬಂದರುಗಳು ಮಾನವ ನಿರ್ಮಿತ. ಹಾಗೆಯೇ ಈ ಕೊಲ್ಲಿಯ ಬಳಿಯಿರುವ ಕೈತಕ್ ವಿಮಾನ ನಿಲ್ದಾಣವೂ ಹೊಸದಾಗಿ ಮಣ್ಣು ತುಂಬಿ ನಿರ್ಮಿಸಿದ ಭೂಪ್ರದೇಶದ ಮೇಲೆ ನಿರ್ಮಾಣವಾಗಿದೆ. ಈ ನಿಲ್ದಾಣಕ್ಕೆ ಪರ್ಯಾಯವಾಗಿ 1998ರಲ್ಲಿ ಹಾಂಕಾಂಗ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ಹೊಸದಾಗಿ ನಿರ್ಮಾಣಮಾಡಲಾಯಿತು. ಹಾಂಕಾಂಗ್‍ನಲ್ಲಿ ತೇವದಿಂದ ಕೂಡಿದ ಬೇಸಗೆ. ಚಳಿಗಾಲದಲ್ಲಿ ಕಡಮೆ ತೇವಾಂಶದಿಂದ ಕೂಡಿದ ತಂಪಾದ ವಾತಾವರಣವಿರುತ್ತದೆ. ಬೇಸಗೆಯಲ್ಲಿ 350 ಸೆ. ಉಷ್ಣಾಂಶವಿದ್ದರೆ, ಚಳಿಗಾಲದಲ್ಲಿ ಕೆಲವೊಮ್ಮೆ 40 ಸೆ. ಮಟ್ಟಕ್ಕಿಳಿಯುತ್ತದೆ. ಹಾಂಕಾಂಗ್ ವರ್ಷದಲ್ಲಿ ಸು.220 ಸೆಂಮೀ ಮಳೆ ಪಡೆದರೂ ಕುಡಿಯುವ ನೀರಿನ ಅಭಾವವಿದೆ. ಚೀನದಿಂದ ನೀರನ್ನು ತರಿಸಿಕೊಳ್ಳುತ್ತದೆ. ಕೃಷಿ ಉತ್ಪನ್ನವಿಲ್ಲದ ಕಾರಣ ಆಹಾರ ವಸ್ತುಗಳನ್ನು ಹೊರದೇಶಗಳಿಂದ ಆಮದುಮಾಡಿಕೊಳ್ಳುತ್ತದೆ. ಕರಾವಳಿ ಪ್ರದೇಶದ ಮುಖ್ಯ ಕಸಬು ಮತ್ಸ್ಯೋದ್ಯಮ. ಹಾಂಕಾಂಗ್‍ನಲ್ಲಿ ವಿವಿಧ ಬಗೆಯ ಕಾರ್ಖಾನೆಗಳಿದ್ದು ವಿವಿಧ ಬಟ್ಟೆ, ವಿದ್ಯುತ್ ಉಪಕರಣಗಳು, ಪ್ಲಾಸ್ಟಿಕ್ ವಸ್ತುಗಳು, ಗಡಿಯಾರ ಮುಂತಾದವುಗಳನ್ನು ತಯಾರಿಸಿ ಚೀನ, ಜಪಾನ್, ಸಿಂಗಪುರ, ಇಂಗ್ಲೆಂಡ್, ಜರ್ಮನಿ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ರಫ್ತುಮಾಡಲಾಗುತ್ತದೆ. ಮಕ್ಕಳ ಆಕರ್ಷಕ ಆಟಿಕೆ ವಸ್ತುಗಳು, ಬೆಲೆಬಾಳುವ ಕಲ್ಲುಗಳು, ಪಾದರಕ್ಷೆ ಮತ್ತು ಉಡುಪುಗಳೂ ಮೇಲ್ಕಂಡ ದೇಶಗಳಿಗೆ ರಫ್ತಾಗುತ್ತದೆ. ಆಹಾರ ವಸ್ತುಗಳನ್ನೂ ಸಾರಿಗೆ ವಾಹನಗಳನ್ನೂ ಪೆಟ್ರೋಲಿಯಮ್ ಮುಂತಾದುವನ್ನೂ ತೈವಾನ್, ಜಪಾನ್, ಚೀನ ಮತ್ತು ಇಂಗ್ಲೆಂಡ್‍ಗಳಿಂದ ಆಮದುಮಾಡಿಕೊಳ್ಳುತ್ತಾರೆ. ಹಾಂಕಾಂಗ್‍ನಲ್ಲಿ ಚಿನ್ನದ ವ್ಯಾಪಾರ ಮುಖ್ಯವಾದದ್ದು. ಇಲ್ಲಿಯ ಜನರ ಜೀವನವೆಲ್ಲ ಇಲ್ಲಿನ ವಿವಿಧ ಆರ್ಥಿಕ ಚಟುವಟಿಕೆಗಳ ಕೇಂದ್ರಗಳಾದ ಬ್ಯಾಂಕು, ವಿಮಾಕಂಪನಿ, ಸಾರಿಗೆಸಂಸ್ಥೆ, ಪ್ರವಾಸಿತಾಣ, ಗೃಹನಿರ್ಮಾಣ, ಹಣಕಾಸು ಪೂರೈಕೆ ಮುಂತಾದವುಗಳಲ್ಲಿ ತೊಡಗಿಕೊಂಡಿದೆ. 

	ಹಾಂಕಾಂಗ್ ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಹಣಕಾಸಿನ ಕೇಂದ್ರವೂ ಆಗಿದೆ. ಹಾಂಕಾಂಗ್‍ನಲ್ಲಿರುವ ಜನರಲ್ಲಿ ಸೇ. 98 ಮಂದಿ ಚೀನಿಯರು. ಉಳಿದ 2 ಭಾಗದಲ್ಲಿ ಆಸ್ಟ್ರೇಲಿಯನ್ನರು, ಭಾರತೀಯರು, ಬ್ರಿಟನ್, ಜಪಾನ್, ವಿಯಟ್ನಾಮ್‍ಗಳಿಂದ ಬಂದವರಾಗಿದ್ದಾರೆ. ಚೀನಿ ಮತ್ತು ಇಂಗ್ಲಿಷ್ ಇಲ್ಲಿನ ಆಡಳಿತ ಭಾಷೆಗಳು. ಹೆಚ್ಚು ಮಂದಿ ದಕ್ಷಿಣ ಚೀನದ ಭಾಷೆ ಕ್ಯಾಂಟೊನಿಸೆಯನ್ನು ಬಳಸುವುದುಂಟು. ಜನಸಾಂದ್ರತೆ ಹೆಚ್ಚಿದಂತೆಲ್ಲ ಹೊಸಪಟ್ಟಣಗಳು ಅಭಿವೃದ್ಧಿಯಾಗುತ್ತಿವೆ. ಈಗಾಗಲೇ ಸೂಯನ್‍ವಾನ್, ಯಎನ್‍ಮುನ್ ಮತ್ತು ಷತಿನ್ ಎಂಬ ಮೂರು ನಗರಗಳಿವೆ. ಹಾಂಕಾಂಗ್‍ನ ಪಶ್ಚಿಮದಲ್ಲಿರುವ ಲ್ಯಾಂನ್‍ಟಾ ದ್ವೀಪದ ಟಂಗ್‍ಚುಂಗ್‍ನಲ್ಲಿ 1990ರಲ್ಲೆ ಒಂದು ನಗರ ನಿಮಾರ್ಣವಾಗಿದೆ. ಇದಕ್ಕೆ ಕಾರಣ ಚೆಕ್‍ಲಾಪ್‍ಕಾಕ್ ಹೊಸ ವಿಮಾನ ನಿಲ್ದಾಣ. 

	ಹಾಂಕಾಂಗ್ ಮತ್ತು ಕೌಲೂನ್ ಈ ಪ್ರಾಂತ್ಯದ ಬಹುದೊಡ್ಡನಗರಗಳು. ವಿಕ್ಟೋರಿಯ ಬಂದರಿನ ಉತ್ತರದಕ್ಷಿಣಕ್ಕೆ ಪರಸ್ಪರ ಎದುರಾಗಿ ಈ ಎರಡು ಮಹಾನಗರಗಳಿವೆ. ಈ ಎರಡೂ ನಗರಗಳ ಮಧ್ಯೆ ದೋಣಿ ಸಂಚಾರವಿದೆ. ಸಮುದ್ರದ ಅಡಿಯಲ್ಲಿ ರೈಲು ಮತ್ತು ರಸ್ತೆ ಸುರಂಗಮಾರ್ಗಗಳನ್ನು ನಿರ್ಮಿಸಲಾಗಿದೆ. ಚೀನಿಯರು ಹಾಂಕಾಂಗ್ ಎಂದು ಕರೆಯುವುದು ಸುಂಗಂಧಿತ ಬಂದರು ಎಂಬ ಅರ್ಥದಲ್ಲಿ. ಕೌಲೂನ್ ಮಹಾನಗರದಲ್ಲಿ ಸು.2.5 ಮಿಲಿಯನ್ ಜನಸಂಖ್ಯೆಯಿದೆ. ಕೌಲೂನ್‍ನ ದಕ್ಷಿಣ ಪರ್ಯಾಯ ದ್ವೀಪದ ತುದಿಯಲ್ಲಿರುವ ಟ್ಸಿಮ್ ಷ ಟೂಯ್ಸ್ ಹಡಗುಕಟ್ಟೆ ಇದೆ. ಇದೊಂದು ದೊಡ್ಡ ವ್ಯಾಪಾರ ಕೇಂದ್ರ. ಕೌಲೂನ್‍ನ ನಾಥನ್ ನಡುರಸ್ತೆ ಪ್ರಮುಖ ವ್ಯಾಪಾರಕೇಂದ್ರ. ಉತ್ತರ ಕೌಲೂನ್ ನಗರದಲ್ಲಿ ವಾಸಗೃಹಗಳೂ ಕಾರ್ಖಾನೆಗಳೂ ಇವೆ. ರೈಲು, ಬಸ್ಸುಗಳು ಮತ್ತು ಸಮದ್ರದಲ್ಲಿನ ಸಣ್ಣಪುಟ್ಟ ದೋಣಿಗಳು ಇಲ್ಲಿಂದ ಚೀನದ ಇತರ ಭಾಗಗಳಿಗೆ, ಗಾಂಗೊಜû ಪ್ರದೇಶಕ್ಕೆ ಸಂಪರ್ಕಕಲ್ಪಿಸುತ್ತವೆ.

	ಹಾಂಕಾಂಗ್ ಮಹಾನಗರದ ಜನಸಂಖ್ಯೆ 1.5 ಮಿಲಿಯನ್. ಹಾಂಕಾಂಗ್ ಪ್ರಾಂತ್ಯದ ಕೇಂದ್ರ ನಗರವಾಗಿರುವ ಇದನ್ನು ಸೆಂಟರ್ ಎಂದು ಕರೆಯುತ್ತಾರೆ. ಇಲ್ಲಿ ಸರ್ಕಾರಿ ಕಚೇರಿಗಳೂ ಹಣಕಾಸಿನ, ವ್ಯಾಪಾರವಹಿವಾಟಿನ ಕೇಂದ್ರ ಕಚೇರಿಗಳೂ ಇವೆ. ಕೇಂದ್ರ ಬ್ಯಾಂಕುಗಳಲ್ಲದೆ, ಚೀನ, ಜಪಾನ್, ಬ್ರಿಟನ್, ಅಮೆರಿಕ ಸಂಯುಕ್ತ ಸಂಸ್ಥಾನ, ಇತರ ದೇಶಗಳ ಬ್ಯಾಂಕುಗಳೂ ಇಲ್ಲಿವೆ. ಪ್ರಪಂಚದ ಎತ್ತರದ ಕಟ್ಟಡಗಳಲ್ಲಿ ಒಂದಾದ ಚೀನಬ್ಯಾಂಕ್ ಕಟ್ಟಡ ಹಾಗೂ ಇತರ ಪ್ರತಿಷ್ಠಿತ ವ್ಯಾಪಾರ ಕಟ್ಟಡಗಳೂ ಇಲ್ಲಿವೆ. ಹಾಂಕಾಂಗ್‍ನ ಕೇಂದ್ರ ನಗರಪ್ರದೇಶ ವಾನ್‍ಚೈನಲ್ಲಿ ಜನವಾಸ ಹೆಚ್ಚು. ಇಲ್ಲಿ ಜಲ ಪ್ರದೇಶವನ್ನು ಆಕ್ರಮಿಸಿಕೊಂಡು ಅದನ್ನು ಭೂಪ್ರದೇಶವಾಗಿ ಪರಿವರ್ತಿಸಿರುವ ಜಾಗದಲ್ಲಿ ಅನೇಕ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಿದ್ದು ಇದರ ಸುತ್ತಲೂ ವಾಣಿಜ್ಯ ಮಳಿಗೆಗಳು ಹಬ್ಬಿಕೊಂಡಿವೆ. ಈ ಕೇಂದ್ರದ ಪೂರ್ವದಲ್ಲಿ ಜಪಾನಿ ವ್ಯಾಪಾರ ಕೇಂದ್ರ ಕಾಸ್ವೆಬೆಯಿದೆ. ಹಾಂಕಾಂಗ್‍ನ ಕೇಂದ್ರಸ್ಥಳಕ್ಕೆ ನೈಋತ್ಯದಲ್ಲಿ ತಯ್‍ಪಿಂಗ್‍ಷಾನ್ ಎಂಬ ಸುಂದರ ಪರ್ವತವಿದೆ. ಇದನ್ನು ವಿಕ್ಟೋರಿಯ ಶಿಖರ ಎಂದೂ ಕರೆಯುತ್ತಾರೆ. ಇಲ್ಲಿ ಹಣವಂತರ ಮನೆಗಳೂ ತಂಗುದಾಣಗಳೂ ಇವೆ. ಪೀಕ್‍ಟ್ರಾಮ್ ರೈಲು ಈ ಪರ್ವತದ ಸಂಪರ್ಕಸಾಧನ. ಸುತ್ತಲೂ ಸಮುದ್ರವಿರುವ ಹಾಂಕಾಂಗ್ ಒಂದು ಸುಂದರ ದ್ವೀಪ ಹಾಗೂ ಪ್ರಪಂಚದ ಮಾರುಕಟ್ಟೆ ಎಂದು ಪ್ರಸಿದ್ಧ.

	ಪ್ರಾಚೀನದಿಂದಲೂ ಹಾಂಕಾಂಗ್‍ನಲ್ಲಿ ಜನವಸತಿಯಿತ್ತು. ಈ ಪ್ರದೇಶ ಕ್ರಿ.ಪೂ. ಸು. 220ರಲ್ಲಿ ಚೀನಿಯರ ಆಡಳಿತಕ್ಕೆ ಸೇರಿತು. ಸಣ್ಣಪುಟ್ಟ ಹಳ್ಳಿಗಳು, ಮೀನು ಹಿಡಿಯುವ ಚಿಕ್ಕಪುಟ್ಟ ಬಂದರುಗಳೂ ಕೃಷಿಕರಿದ್ದ ಕೆಲವು ಗ್ರಾಮಗಳೂ ಇದ್ದು ಸಮುದ್ರಗಳ್ಳರು ಇದನ್ನು ತಮ್ಮ ಭೂನೆಲೆಯಾಗಿ ಉಪಯೋಗಿಸುತ್ತಿದ್ದರು. 1800ರಲ್ಲಿ ಚೀನಿಯರು ತಮ್ಮ ದೇಶದೊಳಕ್ಕೆ ಅಫೀಮು ಬರದಂತೆ ತಡೆಯಲು ಪ್ರಯತ್ನಿಸಿದರು. ಅಫೀಮು ಮಾರಿ ಲಾಭ ಮಾಡಿಕೊಳ್ಳುತ್ತಿದ್ದ ಬ್ರಿಟನ್ನಿನವರೊಡನೆ 1839ರಲ್ಲಿ ಯುದ್ಧಮಾಡಬೇಕಾಗಿ ಬಂತು. ಈ ಅಫೀಮು ಯುದ್ಧದಲ್ಲಿ ಚೀನಿಯರು ಸೋತು 1842ರಲ್ಲಿ ನಾನ್ಜಿಂಗ್ ಒಪ್ಪಂದ ಮಾಡಿಕೊಂಡರು. ಇದರ ಪ್ರಕಾರ ಹಾಂಕಾಂಗ್ ದ್ವೀಪ ಬ್ರಿಟಿಷರ ಆಡಳಿತಕ್ಕೆ ಸೇರಿತು. 1860ರಲ್ಲಿ ಕೌಲೂನ್ ಪರ್ಯಾಯ ದ್ವೀಪ, ಸ್ಟೋನ್‍ಕಟರ್ಸ್ ದ್ವೀಪ ಮುಂತಾದವು ಬ್ರಿಟನ್ನಿನ ವಶವಾದವು. ಚೀನ 1898ರಲ್ಲಿ ಬ್ರಿಟನ್ನಿನೊಡನೆ 99 ವರ್ಷದ ಒಪ್ಪಂದ ಮಾಡಿಕೊಂಡಿತು. ಇದರ ಪ್ರಕಾರ ಇಡೀ ಹಾಂಕಾಂಗ್ ಮತ್ತು ಸುತ್ತಲ ಸಣ್ಣಪುಟ್ಟದ್ವೀಪಗಳು ಬ್ರಿಟನ್ನಿನ ಆಡಳಿತಕ್ಕೆ ಒಳಪಟ್ಟವು. 1800 ರಿಂದ 1900ರವರೆಗೆ ಚೀನದೊಡನೆ ವ್ಯಾಪಾರ ಸಂಬಂಧಕ್ಕೆ ಬ್ರಿಟಿನ್ ಇದನ್ನು ಬಳಸಿಕೊಂಡಿತು. 1911 ಮತ್ತು 1912ರಲ್ಲಿ ಹೆಚ್ಚು ಮಂದಿ ಚೀನಿಯರು ಹಾಂಕಾಂಗ್‍ಗೆ ವಲಸೆ ಬಂದರು. ಚೀನದಲ್ಲಿ ಕ್ರಾಂತಿಯಾದಾಗ ಅನೇಕರು ಹಾಂಕಾಂಗ್‍ಗೆ ವಲಸೆಬಂದರು. 1937ರಲ್ಲಿ ಚೀನವನ್ನು ಜಪಾನ್ ಆಕ್ರಮಿಸಿದಾಗಲೂ ಹೆಚ್ಚುಮಂದಿ ಚೀನಿಯರು ಹಾಂಕಾಂಗ್‍ಗೆ ಓಡಿಬಂದರು. ಇದರಿಂದ ಹಾಂಕಾಂಗ್ ಹೆಚ್ಚು ಜನವಸತಿಯುಳ್ಳ ಪ್ರದೇಶವಾಯಿತು. ಎರಡನೆಯ ಮಹಾಯುದ್ಧದಲ್ಲಿ(1938-45) ಜಪಾನ್ ಹಾಂಕಾಂಗನ್ನು ಆಕ್ರಮಿಸಿದಾಗ ಚೀನದ ಒಳಪ್ರದೇಶಕ್ಕೆ ಇಲ್ಲಿಂದ ಚೀನಿಯರು ಓಡಿಹೋದರು.

	1949ರಲ್ಲಿ ಚೀನದಲ್ಲಿ ಕಮ್ಯುನಿಸ್ಟರ ಆಡಳಿತ ಬಂತು. ಇವರು ಹಾಂಕಾಂಗ್‍ನಲ್ಲಿ ಬ್ರಿಟಿಷರ ಆಡಳಿತವನ್ನು ಒಪ್ಪದೆ ವಿರೋಧಿಸಿದ್ದರು. ಆದರೆ ಯುದ್ಧಮಾಡಿ ವಶಕ್ಕೆ ಪಡೆಯುವ ಮನಸ್ಸುಮಾಡಲಿಲ್ಲ. 1962ರಲ್ಲಿ ಚೀನದಲ್ಲಿ ಆಹಾರ ಅಭಾವವುಂಟಾಗಿ ಅನೇಕ ಚೀನಿಯರು ಹಾಂಕಾಂಗ್‍ಗೆ ಬಂದರು. 1960ರಲ್ಲಿ ಹಾಂಕಾಂಗ್‍ನಲ್ಲಿದ್ದ ಕೆಲವು ಚೀನಿಯರು ಬ್ರಿಟನ್ನಿನ ಆಡಳಿತ ವಿರುದ್ಧ ದಂಗೆಯೆದ್ದರು. ಚೀನ ಇವರಿಗೆ ಪ್ರೋತ್ಸಾಹ ನೀಡಲಿಲ್ಲವಾಗಿ ದಂಗೆ ಅಡಗಿಹೋಯಿತು. ವಿಯಟ್ನಾಮ್ ಯುದ್ಧಕಾಲದಲ್ಲಿ ಕೆಲವು ವಿಯೆಟ್ನಾಮಿಯರು ಹಾಂಕಾಂಗ್‍ಗೆ ಓಡಿಬಂದರು. 1980ರ ಹೊತ್ತಿಗೆ ಚೀನ ಬ್ರಿಟನ್ನಿನೊಡನೆ ಮಾತುಕತೆ ಪ್ರಾರಂಭಿಸಿತು; ಒಪ್ಪಂದಕ್ಕೆ ಚೀನ, ಬ್ರಿಟನ್ ಎರಡೂ ಸಹಿಹಾಕಿದವು(1984). ಹಾಂಕಾಂಗ್ 1997 ಜುಲೈ 1ರಿಂದ ಚೀನದ ವಿಶೇಷ ಆಡಳಿತ ಘಟಕವಾಗಿದೆ. ಒಂದು ದೇಶ ಎರಡು ಕ್ರಮದ ರೀತಿಯಲ್ಲಿ ಹಾಂಕಾಂಗ್‍ನ ರಕ್ಷಣೆ ಮತ್ತು ವಿದೇಶಾಂಗ ನೀತಿಯನ್ನೂ ಚೀನ ತೆಗೆದುಕೊಂಡಿದೆ. ಆರ್ಥಿಕ ನೀತಿ ಹಾಗೂ ಇತರ ಸಂಗತಿಗಳನ್ನು 1997ರ ಅನಂತರ 50 ವರ್ಷಗಳವರೆಗೆ ಹಾಂಕಾಂಗ್‍ನ ಆಡಳಿತಕ್ಕೆ ಬಿಟ್ಟುಕೊಟ್ಟಿದೆ.

											(ಟಿ.ಬಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ